ತಿಮ್ಮಪ್ಪಯ್ಯ, ಮುಳಿಯ		
	1888-1950. ಕನ್ನಡ - ಸಂಸ್ಕøತ ವಿದ್ವಾಂಸ, ಕವಿ, ಸಂಶೋಧಕ, ವಿಮರ್ಶಕ, ಗಮಕಿ, ಶಿಕ್ಷಕ, ನಾಡೋಜ ಪಂಪ, ಆದಿಪುರಾಣಸಂಗ್ರಹ, ಸಮಸ್ತಭಾರತಸಾರ ಮುಂತಾದ ಗ್ರಂಥಗಳ ಕರ್ತೃ. ಹುಟ್ಟಿದ್ದು ದಕ್ಷಿಣ ಕನ್ನಡ ಜಿಲ್ಲೆಗೆ ಸೇರಿದ ಬಂಟ್ವಾಳ ತಾಲ್ಲೂಕಿನ ವಿಟ್ಲಪೇಟೆಯಿಂದ ಐದಾರು ಮೈಲಿ ದೂರದಲ್ಲಿರುವ ಮುಳಿಯ ಗ್ರಾಮದಲ್ಲಿ. ತಂದೆ ಕೇಶವ ಭಟ್ಟ; ತಾಯಿ ಮೂಕಾಂಬಿಕಾ, ಮುಳಿಯದ ಅರಸರು ಎಂದು ಖ್ಯಾತವಾಗಿದ್ದ ಮನೆತನ ಇವರದು. ಆದರೆ ಇವರು ಹುಟ್ಟಿದಾಗ ಮುಳಿಯ ಮನೆತನ ಬಡತನದಲ್ಲಿತ್ತು. 

	ತಿಮ್ಮಪ್ಪಯ್ಯನವರ ಪ್ರಾಥಮಿಕ ಶಿಕ್ಷಣ ಹಳ್ಳಿಯಲ್ಲಿಯೇ ನಡೆಯಿತು. ವಾಮನ ಮಾಸ್ತರ ಎಂಬುವರು ಇವರ ಗುರುಗಳಾಗಿದ್ದರು. ವಿಟ್ಲದಲ್ಲಿ ನಾಲ್ಕನೆ ತರಗತಿಯ ಪರೀಕ್ಷೆಗೆ ಕುಳಿತರು. ಅಲ್ಲಿಗೆ ಇವರ ಶಾಲೆಯ ಕಲಿಕೆ ಕೊನೆಯಾಯಿತು. ಮುಂದೆ ಖಾಸಗಿಯಾಗಿ ಕಲ್ಲಜೆ ಕೃಷ್ಣಶಾಸ್ತ್ರಿಗಳ ಬಳಿ ಸಂಸ್ಕøತಾಭ್ಯಾಸ ಮಾಡಿದರು. ಆ ವೇಳೆಗೆ ಇವರ ತಂದೆ ಸಾಲದಲ್ಲಿ ಮುಳುಗಿ ಹೋಗಿದ್ದರು. ಸಂಸಾರ ರಥ ಸಾಗುವುದು ಕಷ್ಟವಾಯಿತು. ತಿಮ್ಮಪ್ಪಯ್ಯನವರ ಜ್ಞಾನಪೀಪಾಸೆ ಇಂಗದಾಯಿತು. ಹೀಗಾಗಿ 1906ರಲ್ಲಿ ತಿರುವಾಂಕೂರಿಗೆ ಓಡಿಹೋದರು. ಅಲ್ಲಿ ಬಹಳ ಕಷ್ಟ ಅನುಭವಿಸಿ ಸಂಸ್ಕøತ ಹಾಗೂ ಸ್ವಲ್ಪ ಸಂಗೀತ ಕಲಿತರು. ಅಲ್ಲಿಂದ ಮೈಸೂರಿಗೆ ಬಂದರು. ಅಲ್ಲಿ ವಾರಾನ್ನದಿಂದ ಜೀವಿಸಿ ವಾಸುದೇವಾಚಾರ್ಯರ ಬಳಿ ಸಂಗೀತ ಕಲಿಕೆ ಮುಂದುವರಿಸಿದರು. 

	1910ರ ವರೆಗೆ ನಾಡಾಡಿಯಾಗಿದ್ದು ಆ ಜೀವನದಲ್ಲಿ ಬೇಸರ ಕಂಡಿತಾಗಿ ಊರಿಗೆ ಮರಳಿದರು. ಅಲ್ಲಿ ಯಕ್ಷಗಾಗ, ತಾಳಮದ್ದಳೆ, ಭಾರತ ರಾಮಾಯಣ ವಾಚನಗಳಲ್ಲಿ ಆಸಕ್ತಿ ತಳೆದರು. ಕೆಲವೊಂದು ಯಕ್ಷಗಾನ ಪ್ರಸಂಗಗಳನ್ನು ಬರೆದರು. ಇದೇ ಸಮಯದಲ್ಲಿ ಆಮ್ಮೆಂಬಳ ಶ್ರೀನಿವಾಸ ಪೈಗಳು ಇವರನ್ನು ಕೆನರಾ ಹೈಸ್ಕೂಲಿನಲ್ಲಿ ಕನ್ನಡ ಪಂಡಿತರನ್ನಾಗಿ ನೇಮಿಸಿದರು (1911) . 

	ಅಲ್ಲಿಂದ ಇವರ ವಾಸ ಮಂಗಳೂರಲ್ಲಾಯಿತು. 1913ರಲ್ಲಿ ಚಂದ್ರಾವಳಿವಿಲಾಸಂ ಎಂಬ ಹಳಗನ್ನಡ ಗದ್ಯಕಾವ್ಯವನ್ನು ಪ್ರಕಟಿಸಿದರು. ಮುದ್ದಣನ ಕಾವ್ಯರೀತಿಯನ್ನು ಅನುಸರಿಸಿ ಬರೆದ ಈ ಕಾವ್ಯ ಅವರೇ ಹೇಳುವಂತೆ `ಇದು ಅದ್ಭುತರಾಮಾಯಣ, ರಾಮಾಶ್ವಮೇಧಂಗಳೆಂಬ ಆರಾಮಗಳಲ್ಲಿ ವಿಹರಿಸಲಿಚ್ಛಿಸುವವರಿಗೆ ಪ್ರವೇಶದ್ವಾರವಾಗಿದೆ; 1915ರಲ್ಲಿ ಕನ್ನಡ ಕೋಗಿಲೆ ಮಾಸಪತ್ರಿಕೆಯನ್ನು ಪೇಜಾವರ ಬಾಬುರಾಯರ ಪ್ರೋತ್ಸಾಹದಿಂದ ಆರಂಭಿಸಿದರು. ಅದು ಇವರಿಗೆ ಕೋಗಿಲೆ ತಿಮ್ಮಪ್ಪಯ್ಯ ಎಂಬ ಹೆಸರು ತಂದುಕೊಟ್ಟಿತ್ತಾದರೂ 4 ವರ್ಷಕ್ಕಿಂತ ಹೆಚ್ಚು ಕಾಲ ಬಾಳಲಿಲ್ಲ. 1916ರಲ್ಲಿ ದೇವಕಿ ಎಂಬಾಕೆಯೊಂದಿಗೆ ಇವರ ಮದುವೆಯಾಯಿತು. ಆಕೆ ಅನುಕೂಲೆಯಾದ ಪತ್ನಿಯಾಗಿದ್ದರು. 

	1918ರಲ್ಲಿ ಇವರು ಸೇಂಟ್ ಅಲೋಷಿಯಸ್ ಕಾಲೇಜಿನಲ್ಲಿ ಅಧ್ಯಾಪಕರಾಗಿ ಸೇರಿ ಅಲ್ಲಿ ಸುಮಾರು ಮೂವತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದರು. ಆ ದಿನಗಳಲ್ಲಿ ಸಾವಿರ ಸಾವಿರ ಸಂಖ್ಯೆಯ ವಿದ್ಯಾರ್ಥಿಗಳನ್ನು ಕನ್ನಡದ ಕಟ್ಟಾಭಿಮಾನಿಗಳಾಗಿಸಿದರು. 

	ಇವರು ಅಚ್ಚ ಕನ್ನಡಾಭಿಮಾನಿಗಳು. ಸೊಬಗಿನ ಬಳ್ಳಿ (1917) ಎಂಬ ಕಾವ್ಯವನ್ನೂ ನಡತೆಯ ನಾಡು (1917) ಎಂಬ ಸಂಗೀತ ನಾಟಕವನ್ನೂ ಬರೆದು ಆಂಡಯ್ಯನ ಮಾರ್ಗವನ್ನು ಮುಂದುವರೆಸಿದರು. ಇವಲ್ಲದೆ ಬಡಹುಡುಗಿ (1917) ಎಂಬ ಕಥನಕಾವ್ಯವನ್ನೂ ನವನೀತರಾಮಾಯಣ (1940) ಎಂಬ ರಗಳೆಕಾವ್ಯವನ್ನೂ ಹಗಲಿರುಳಿ (1918) ಎಂಬ ನಾಟಕವನ್ನೂ ನಾಡೋಜ ಪಂಪ (1938); ಆದಿಪುರಾಣ ಸಂಗ್ರಹ; ಸಮಸ್ತಭಾರತಸಾರ (1941) ಎಂಬ ಗ್ರಂಥಗಳನ್ನೂ ಪಶ್ಚಾತ್ತಾಪ (1944); ವೀರಬಂಕೆಯ (1948) ಎಂಬ ಕಾದಂಬರಿಗಳನ್ನೂ ಪಾರ್ತಿಸುಬ್ಬ (1945); ಕವಿರಾಜಮಾರ್ಗವಿವೇಕ (1948-ಭಾಗ 1) ಎಂಬ ವಿಮರ್ಶಾಗ್ರಂಥಗಳನ್ನೂ ತ್ರಿಪುರದಾಹ (1914) ಎಂಬ ಶಿಶುಮಾಯಣನ ಸಾಂಗತ್ಯ ಕಾವ್ಯದ ಗದ್ಯಾನುವಾದವನ್ನೂ ಬರೆದಿದ್ದಾರೆ. 

	ನಾಡೋಜ ಪಂಪ ಇವರ ಒಂದು ಮುಖ್ಯ ಗ್ರಂಥ. ಪಂಪನ ಕುಲಗೋತ್ರ, ರಾಜಾಶ್ರಯ, ಕಾವ್ಯರಸ, ನಿರೂಪಣಾಶಕ್ತಿ, ಪ್ರತಿಭೆಗಳ ದರ್ಶನವನ್ನು ಇದು ಒದಗಿಸುತ್ತದೆ. 

	ಇವರ 1913ರಲ್ಲಿ ಕಾರವಾರದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಹಾಗೂ 1941ರಲ್ಲಿ ಲಕ್ಷ್ಮೇಶ್ವರದಲ್ಲಿ ನಡೆದ ಪಂಪನ ಸಹಸ್ರ ಸಾಂವತ್ಸರಿಕ ಉತ್ಸವದ ಅಧ್ಯಕ್ಷರಾಗಿದ್ದರು. 

	ಇವರು ಮರಣಾನಂತರ ಕನ್ನಡ ಸಾಹಿತ್ಯ ಮತ್ತು ಇತರ ಉಪನ್ಯಾಸಗಳು (1950) ಎಂಬ ಲೇಖನಗಳ ಸಂಗ್ರಹಗಳನ್ನೂ ಕನ್ನಡ ನಾಡೂ ದೇಶಿ ಸಾಹಿತ್ಯವೂ (1954) ಎಂಬ ಮೂರು ಉಪನ್ಯಾಸಗಳ ಸಂಗ್ರಹವನ್ನೂ ರಾವುತ ರಂಗಪ್ಪ (1959) ಎಂಬಗೀತ ನಾಟಕವನ್ನೂ ಪ್ರಕಟಿಸಲಾಗಿದೆ. 							(ಕೆ.ಎಸ್,ಬಿಎಚ್ ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ